Tuesday, July 27, 2010

ನಾ ಬಲ್ಲೆ ಅದನ್ನೆಲ್ಲಾ ನೀ ಹೇಳದಿದ್ದರೂ

ಎಲ್ಲೋ ಕೇಳಿದ ಮಧುರ ಹಾಡು
ಅಲೆ ಅಲೆಯಾಗಿ ಹೊಮ್ಮುತಿದೆ
ಎದೆಯ ಸದನದಿ ನೇರ
ನೀ ಎದುರಾದ ಖುಷಿಯಿಂದ
ನೀ ಬಲ್ಲೆ ಅದನ್ನೆಲ್ಲಾ ನಾ ಹೇಳದಿದ್ದರೂ

ನಾ-ನೀನಿರುವ
ಈ ಜಗದ ಮೊಗಸಾಲೆಯಲಿ
ಹಲವು ನೂರು ಜನರಿದ್ದರೂ
ನಾನು ಮಾತ್ರವೇ ಒಂಟಿ
ನೀ ಬಲ್ಲೆ ಅದನೆಲ್ಲಾ ನಾಹೇಳದಿದ್ದರೂ

ನುಡಿವ ಮಾತುಗಳಿಲ್ಲಿ
ನಡೆವ ಹೆಜ್ಜೆಗಳಲ್ಲ
ನುಡಿಗೂ-ನಡೆಗೂ ತಪ್ಪಿರುವ ಮೇಳದಲ್ಲಿ
ಬರಿ ಹಿಮ್ಮೇಳ ನಾನು-ನೀನು
ನಾ ಬಲ್ಲೆ ಅದನ್ನೆಲ್ಲಾ ನೀ ಹೇಳದಿದ್ದರೂ

ಬದುಕು ವಾಸ್ತವದಲ್ಲಿ
ಶುಷ್ಕ ವ್ಯವಹಾರ
ಜಗದ ಜುತ್ತದು ಇಂದು
ಒಣ ಹಣದ ಕೈಯಲ್ಲಿ
ನಾ-ನೀ... ಅದರಲ್ಲಿ ಒಬ್ಬರು
ನಾ ಬಲ್ಲೆ ಅದನ್ನೆಲ್ಲಾ ನೀ ಹೇಳದಿದ್ದರೂ

ಪ್ರವಾಹಕ್ಕಿದಿರಾಗಿ ಈಸಿ
ದಡ ಸೇರಲರಿಯದೆ
ಬದಲಿಸಿದೆ ಗತಿಯ
ಬದುಕುವದ ಕಲಿಯಲು
ನೀ ಬಲ್ಲೆ ಅದನೆಲ್ಲಾ ನಾ ಹೇಳದಿದ್ದರೂ

No comments: