Thursday, December 6, 2012

ನಗರದೊಂದು ಮೂಲೆಯಲ್ಲಿ

ನಗರದೊಂದು ಮೂಲೆಯಲ್ಲಿ

ನಗರದೊಂದು ಮೂಲೆಯಲ್ಲಿ ಗೆಳೆಯನಿರುವನೊಬ್ಬ
ಅವನ ಕಂಡ ದಿನವು  ನನ್ನ ಪಾಲಿಗದುವೆ ಹಬ್ಬ
ದಿನಗಳುರುಳುತಿಹವು, ವಾರಗಳ ಹಾಗೆ ಓಡಿ
ಅದು ತಿಳಿವ ಮೊದಲೇ ವರುಷ ಸಾಗಿ ಹೋಯ್ತು ನೋಡಿ

ನಾ ಕಾಣಲಿಲ್ಲ ಹಳೆಗೆಳೆಯರ ಮುಸುಡನ್ನು ಇನ್ನು
ದಿನ ದಿನಗಳು ಗತಿಸುಟಿವೆ ಎದುರಿಸುತ ಬದುಕ ಪೈಪೋಟಿಯನು
ಆದರವ ತಿಳಿದುಕೊಂಡಿರುವ, ನಾ ಇನ್ನು ಅವನ ನೆನೆವೆನೆಂದು
ಕಳೆದ ದಿನಗಳಲ್ಲಿ ಅವನ ಮನೆಗೆ ನಾ ನಿಟ್ಟ ಭೆಟ್ಟಿ ನೆನೆದು

ಬಾಲ್ಯದಲ್ಲಿ ಬರುತಲಿದ್ದ ಅವನೂ ಕೂಡ ನಮ್ಮ ಮನೆಗೆ
ಆದರೀಗ ಮುಳುಗಿರುವನನೂ, ಮೈಮರೆತಿಹನು
ಬದುಕಿನ ಈ ಮೂರ್ಖ ಆಟದಲ್ಲಿ
ಹೆಸರನೊಂದು ಮಾಡುವ ಹುಚ್ಚು ಆಸೆಯಲ್ಲಿ

ನಾ ನನ್ನುವೆ! "ನಾಳೆ ಅವಗೆ ಕರೆಯಮಾಡುವೆ,
ತೂರಬೇಕಲ್ಲ ನಾ ಇನ್ನೂ ಅವನ ನೆನೆವೆನೆಂದು"
ನಾಳೆ ಬರುವುದು, ಮುಗಿಯದಂತೆ ಮತ್ತೆ ಮತ್ತೆ
ನಮ್ಮ ನಡುವಿನಂತರವು ಮಾತ್ರ ಇರುವಷ್ಟಕ್ಕೆ ಉಳಿಯಲಿಲ್ಲ

ನಗರದೊಂದು ಮೂಲೆಯಲ್ಲಿ, ಕೆಲವೇ ಗಾವುದ ದೂರದಲ್ಲಿ
ತಂತಿ ಬಂತು ಸುದ್ದಿ ತಂತು, "ಸ್ವಾಮೀ ನಿಮ್ಮ ಗೆಳೆಯ ಸತ್ತನಲ್ಲಿ"
ಇದನು ತಾನೇ, ನಾವು ಪಡೆವುದು ಕೊನೆಯಗಳಿಗೆಯಲ್ಲಿ
ನಗರದೊಂದು ಮೂಲೆಯಲ್ಲಿ , ಕಳೆದ ಹೋದ ಗೆಳೆಯನಲ್ಲಿ

 (ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಿತ ಕವನ )
ಮೂಲ: Around the Corner by Charles Hanson Towne

-ಜಯಪ್ರಕಾಶ್ ಶಿವಕವಿ

Wednesday, November 28, 2012

ಬಾಳ ಪಯಣದ ತಿರುವೊಂದರಲಿ


ನಿನ್ನ ಮನೆಯ ಅಂಗಳದಲ್ಲಿ
ನಾ ಹೆಜ್ಜೆಯಿಟ್ಟ ಘಳಿಗೆಯಲ್ಲಿ
ನಿನ್ನ ಹೆರಳ ಮಲ್ಲೆದಂಡೆ
ಏನೋ ಹೇಳ ಹೊರಟಿದೆ
ಮುಖವರಳಿಸಿ ನಗುವತುಂಬಿ
ಮೈಯುಬ್ಬಿಸಿ ನಲಿದಿವೆ 
 
ಕಣ್ಣಮೇಲಿನ ಕಾಡಿಗೆಯ ಬಿಲ್ಲು
ಬಿರಿವ ನೋಟದ ಬಾಣವ ಹೂಡಿ
ನನ್ನ ಎದೆಗೆ ನಾಟಲೆಂದು
ಬಿಡುವ ಯತ್ನ ನಡೆಸಿದೆ
 
ಬಾಳ ಪಯಣದ ತಿರುವೊಂದರಲಿ
ನನ್ನ ನಿನ್ನಯ ಭೆಟ್ಟಿಯು
ನಿನ್ನ ಮನೆಯ ಅಂಗಳದಲ್ಲಿ
ನಾ ಹೆಜ್ಜೆಯಿಟ್ಟ ಘಳಿಗೆಯಲ್ಲಿ
ನೀನು ಸೇರಿದೆ ಎನ್ನಮನದ
ಅಂಗಳಕೆ, ನಾನು ಕರೆಯುವ ಮುನ್ನವೇ
ಗೆಳತಿಯಾದೆ ಒಡತಿಯಾದೆ
ನನ್ನ ಮುಂದಿನ ಭವ್ಯ ಬದುಕಿಗೆ 
ವರ್ಷವಾಯಿತು ನಮ್ಮ ಬೇಟಿಗೆ
ಹರ್ಷ ತುಂಬಿದೆ ಬಾಳಲಿ
ನಿನ್ನ ಪ್ರೀತಿಯ ಕಡಲು ಸೇರಿದೆ
ಎನ್ನ ಜೀವದ ಜೀವನದಿ

ಮೂರುಕಾಲವೂ ಮೂಡಿಬರುತಿವೆ
ನೂರುಭಾವವೂ ಮನದಲಿ
ನಿನ್ನ ಕಾಣುವ ಕಾತುರತೆಯೂ
ಹಿರಿದಾಗುತ ಪ್ರತೀಕ್ಷಣ

ನಿನ್ನ ಎಲ್ಲ ಕನಸುಗಳನು
ಕೈಯ ಹಿಡಿದು ನಡೆಸುವೆ
ನಿನ್ನ ನಗುವ ಮೊಗದ ಸಿರಿಯು
ಎಂದೂ ಮಾಸದಂತಿರಿಸುವೆ
ಎಂದೂ ಹೀಗೆಯೇ ಮುಂದೆಸಾಗುವ
ಚೆಂದದಿಂದಲಿ ಬಾಳುತ
ಒಂದೇ ಮನದಲಿ ಒಂದೆ ಮಾತನು
ಒಂದೇ ರಾಗದಿ ಹಾಡುತ
- ಜಯಪ್ರಕಾಶ ಶಿವಕವಿ

ಮಣ್ಣಿನಲಿ ಮಣ್ಣಾಗಿ ಹುಟ್ಟಿದವರು


ನಾವು ಮಣ್ಣಿನಲಿ ಮಣ್ಣಾಗಿ 
ಹುಟ್ಟಿದವರು 
ಅವರಿವರಿಂದ ತುಳಿಸಿಕೊಂಡು 
ಥೂ ಅನಿಸಿಕೊಂಡು 
ಹೊಟ್ಟೆಕಿಚ್ಚನು ಜಗಕೆ ಹಚ್ಚುವತೆರದಲಿ 
ನೋಡು ನೋಡುತ್ತಲೇ
ಮೇಲೆದ್ದು ಬಂದವರು 

ಎಲ್ಲ ಮೇರೆಗಳನ್ನು ಮೀರಿ 
ಬಿಗಿಹಿಡಿದು ಕೆಳಸೆಳೆವ 
ಎಲ್ಲ ಬಂಧಗಳನ್ನು ತೂರಿ 
ಬದುಕು ಕಟ್ಟಿಕೊಂಡವರು 
ಬಾನಿನೆತ್ತರಕೆ ಬೆಳೆಯ 
ಹೊರಟವರು.

ನಾವು ಮಣ್ಣಿನಲಿ ಮಣ್ಣಾಗಿ 
ಹುಟ್ಟಿದವರು 
ಅವರಿವರು ಉಂಡು ಹುಟ್ಟು 
ಬಿಸುಟಿದ್ದೆಲ್ಲ  ತಿಂದು ಅರಗಿಸಿಕೊಂದವರು 
ಇಟ್ಟ ಎಡೆಯಲ್ಲಿರದೆ, ಹೋರಾಟದ ಕಿಚ್ಚಿನಲ್ಲಿ 
ನಮ್ಮ ನಾಳೆಗಳ ನಾವೇ, ನಮ್ಮ ಕೈಯಾರ 
ಕೆತ್ತಿಕೊಂದವರು. 

ಉರಿವ ಸೂರ್ಯನ  ಉರಿಯು
ಕೋರೆವ ರಾತ್ರಿಯ ಚಳಿಯು 
ಭೋರ್ಗರೆವ ಮುಸಳಧಾರೆಯು 
ಹೊಸಕಿ ಹಾಕದ, ಆತ್ಮಸ್ಥೈರ್ಯವ ಹೊತ್ತು 
ಬಾನ ಚುಕ್ಕಿಗಳಿಗೆ ಮುತ್ತುಗರೆಯ
ಹೊರಟವರು.

ನಾವು ಮಣ್ಣಿನಲಿ ಮಣ್ಣಾಗಿ 
ಹುಟ್ಟಿದವರು 
ಮಣ್ಣಿನಲ್ಲೇ ಬೇರಿತ್ತು, ಪಾತಳಕ್ಕಿಳಿಸಿ 
ಎಲ್ಲ ಸತ್ವವನು ಹೀರಿ 
ವಿಶಾಲ ಹಾಲುಹಾದಿಯ ತುಂಬಾ 
ತುಂಬ ಹೊರಟವರು 

-ಜಯಪ್ರಕಾಶ್ ಶಿವಕವಿ