Tuesday, September 10, 2013

ನನ್ನ ಕನಸುಗಳೆಲ್ಲ

ನನ್ನ ಕನಸುಗಳೆಲ್ಲ
ನನ್ನೊಳಗೊಳಗೆ ಉಡುಗಿ ಹೋಗುತಿರಲು
ಅಡಗಿ ನೋಡಲಿ ಹ್ಯಾಗೆ
ನಾನು ಸುಮ್ಮನೆ

ನನ್ನ ಕನಸುಗಳೆಲ್ಲ
ಕಸುವ ಕಳೆದುಕೊಳ್ಳುತಿರಲು
ಕುಳಿತು ನೋಡಲಿ ಹ್ಯಾಗೆ
ನಾನು ಸುಮ್ಮನೆ

ನನ್ನ ಕನಸುಗಳೆಲ್ಲ
ಕೈ ಕೊಸರಿ, ಜಾರಿ ದೂರವಾಗುತಿರಲು
ನಿಂತು ನೋಡಲಿ ಹ್ಯಾಗೆ
ನಾನು ಸುಮ್ಮನೆ

ನನ್ನ ಕನಸುಗಳೆಲ್ಲ
ಕೊನೆಯ ಉಸುರಿಡಿದು
ಆಸರೆಯ ಬಯಸಿ
ದೆಸೆ-ದೆಸೆಗೆ, ಕೈ ಕೈ ಚಾಚುತಿರಲು
ಕೈ ಕಟ್ಟಿಕೊಂಡು, ನೋಡಲಿ ಹ್ಯಾಗೆ
ನಾನು ಸುಮ್ಮನೆ

ನನ್ನ ಕನಸುಗಳಿಗಾಗಿ
ಹೊತ್ತ ಮನ್ನೆಷ್ಟೋ
ಆಳ ಬಾವಿಗಳಿಂದ
ಎತ್ತಿದ್ದ ನೀರೆಷ್ಟೋ
ಹೊತ್ತು ಸಾಗಲು ನಿತ್ಯ
ತುಳಿದ ಮುಳ್ಳುಗಳೆಷ್ಟೊ

ನನ್ನ ಕನಸುಗಳನೆಲ್ಲಾ
ಬಹುದಿನಗಳಿಂದ
ಬಹುಜತನದಿಂದ
ಜೋಪಾನ ಮಾಡಿ
ನೀರೆರೆದು, ಗೊಬ್ಬರವುಣಿಸಿ
ಬೆಳೆಸಿದ್ದೆನು
ನನ್ನದೆಲ್ಲವನೂ, ನಾನದರಲ್ಲೇ
ಕಾಣಬಯಸಿದ್ದೇನು

ನನ್ನ ಕನಸುಗಳೆಲ್ಲ
ಮಂಕಾಗಿ ಮಲಗಿದವೇ?
ಮೊಗ್ಗಾಗಿ, ಅರಳದಲೆ
ಬಾಡಿಹೊಗುವವೇ?
ಮಿಡಿಯಾಗಿ, ಕಾಯಾಗಿ
ಹಣ್ಣಾಗದೇ
ಉದುರಿ ಹೋಗುವವೇ?

ಕುಸಿದ ಕನಸುಗಳನ್ನು
ಹಿಡಿದು ಮೇಲೆತ್ತಿ
ತಲೆಯೆತ್ತಿ ನಿಲ್ಲಿಸಲು
ಧೈರ್ಯವನ್ನು ನೀಡಿ
ದೃಢತೆಯನು ನೀಡಲು
ಶಸ್ತ್ರಚಿಕಿತ್ಸೆಯನು ಮಾಡಿ
ಸುಸ್ಥಿತಿಗೆ ತಂದಿಡಲು
ಬೇಕಿದೆ ಗೆಳೆಯಾ !
ನಿನ್ನಾತ್ಮ ಸ್ಥೈರ್ಯದ
ಅಖಂಡ ವಿಶ್ವಾಸದ
ವಿಶ್ವಾತ್ಮ ಚೇತನದ
ಬಲ ಬೆಂಬಲದ
ಸವಿ ಸಿಹಿಯ ಸ್ಫೂರ್ತಿ


ಹೊಳೆವ ತಾರೆಗಳ
ಹೊಳಪಾಗಿ ಬಾ ಗೆಳೆಯಾ
ಸಿಡಿವ ಕೋಲ್ಮಿಂಚುಗಳ
ವಿದ್ಯುತ್ ಚ್ಛಕ್ತಿಯ
ಸಂಚಲನವಾಗಿ
ಮೊಳಗುವ ಗುಡುಗುಗಳ
ಆರ್ಭಟಿಸುವ ಸಿಡಿಲುಗಳ
ಘನ ಘೋಷವಾಗಿ

-ಜಯಪ್ರಕಾಶ್ ಶಿವಕವಿ





Thursday, December 6, 2012

ನಗರದೊಂದು ಮೂಲೆಯಲ್ಲಿ

ನಗರದೊಂದು ಮೂಲೆಯಲ್ಲಿ

ನಗರದೊಂದು ಮೂಲೆಯಲ್ಲಿ ಗೆಳೆಯನಿರುವನೊಬ್ಬ
ಅವನ ಕಂಡ ದಿನವು  ನನ್ನ ಪಾಲಿಗದುವೆ ಹಬ್ಬ
ದಿನಗಳುರುಳುತಿಹವು, ವಾರಗಳ ಹಾಗೆ ಓಡಿ
ಅದು ತಿಳಿವ ಮೊದಲೇ ವರುಷ ಸಾಗಿ ಹೋಯ್ತು ನೋಡಿ

ನಾ ಕಾಣಲಿಲ್ಲ ಹಳೆಗೆಳೆಯರ ಮುಸುಡನ್ನು ಇನ್ನು
ದಿನ ದಿನಗಳು ಗತಿಸುಟಿವೆ ಎದುರಿಸುತ ಬದುಕ ಪೈಪೋಟಿಯನು
ಆದರವ ತಿಳಿದುಕೊಂಡಿರುವ, ನಾ ಇನ್ನು ಅವನ ನೆನೆವೆನೆಂದು
ಕಳೆದ ದಿನಗಳಲ್ಲಿ ಅವನ ಮನೆಗೆ ನಾ ನಿಟ್ಟ ಭೆಟ್ಟಿ ನೆನೆದು

ಬಾಲ್ಯದಲ್ಲಿ ಬರುತಲಿದ್ದ ಅವನೂ ಕೂಡ ನಮ್ಮ ಮನೆಗೆ
ಆದರೀಗ ಮುಳುಗಿರುವನನೂ, ಮೈಮರೆತಿಹನು
ಬದುಕಿನ ಈ ಮೂರ್ಖ ಆಟದಲ್ಲಿ
ಹೆಸರನೊಂದು ಮಾಡುವ ಹುಚ್ಚು ಆಸೆಯಲ್ಲಿ

ನಾ ನನ್ನುವೆ! "ನಾಳೆ ಅವಗೆ ಕರೆಯಮಾಡುವೆ,
ತೂರಬೇಕಲ್ಲ ನಾ ಇನ್ನೂ ಅವನ ನೆನೆವೆನೆಂದು"
ನಾಳೆ ಬರುವುದು, ಮುಗಿಯದಂತೆ ಮತ್ತೆ ಮತ್ತೆ
ನಮ್ಮ ನಡುವಿನಂತರವು ಮಾತ್ರ ಇರುವಷ್ಟಕ್ಕೆ ಉಳಿಯಲಿಲ್ಲ

ನಗರದೊಂದು ಮೂಲೆಯಲ್ಲಿ, ಕೆಲವೇ ಗಾವುದ ದೂರದಲ್ಲಿ
ತಂತಿ ಬಂತು ಸುದ್ದಿ ತಂತು, "ಸ್ವಾಮೀ ನಿಮ್ಮ ಗೆಳೆಯ ಸತ್ತನಲ್ಲಿ"
ಇದನು ತಾನೇ, ನಾವು ಪಡೆವುದು ಕೊನೆಯಗಳಿಗೆಯಲ್ಲಿ
ನಗರದೊಂದು ಮೂಲೆಯಲ್ಲಿ , ಕಳೆದ ಹೋದ ಗೆಳೆಯನಲ್ಲಿ

 (ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಿತ ಕವನ )
ಮೂಲ: Around the Corner by Charles Hanson Towne

-ಜಯಪ್ರಕಾಶ್ ಶಿವಕವಿ

Wednesday, November 28, 2012

ಬಾಳ ಪಯಣದ ತಿರುವೊಂದರಲಿ


ನಿನ್ನ ಮನೆಯ ಅಂಗಳದಲ್ಲಿ
ನಾ ಹೆಜ್ಜೆಯಿಟ್ಟ ಘಳಿಗೆಯಲ್ಲಿ
ನಿನ್ನ ಹೆರಳ ಮಲ್ಲೆದಂಡೆ
ಏನೋ ಹೇಳ ಹೊರಟಿದೆ
ಮುಖವರಳಿಸಿ ನಗುವತುಂಬಿ
ಮೈಯುಬ್ಬಿಸಿ ನಲಿದಿವೆ 
 
ಕಣ್ಣಮೇಲಿನ ಕಾಡಿಗೆಯ ಬಿಲ್ಲು
ಬಿರಿವ ನೋಟದ ಬಾಣವ ಹೂಡಿ
ನನ್ನ ಎದೆಗೆ ನಾಟಲೆಂದು
ಬಿಡುವ ಯತ್ನ ನಡೆಸಿದೆ
 
ಬಾಳ ಪಯಣದ ತಿರುವೊಂದರಲಿ
ನನ್ನ ನಿನ್ನಯ ಭೆಟ್ಟಿಯು
ನಿನ್ನ ಮನೆಯ ಅಂಗಳದಲ್ಲಿ
ನಾ ಹೆಜ್ಜೆಯಿಟ್ಟ ಘಳಿಗೆಯಲ್ಲಿ
ನೀನು ಸೇರಿದೆ ಎನ್ನಮನದ
ಅಂಗಳಕೆ, ನಾನು ಕರೆಯುವ ಮುನ್ನವೇ
ಗೆಳತಿಯಾದೆ ಒಡತಿಯಾದೆ
ನನ್ನ ಮುಂದಿನ ಭವ್ಯ ಬದುಕಿಗೆ 
ವರ್ಷವಾಯಿತು ನಮ್ಮ ಬೇಟಿಗೆ
ಹರ್ಷ ತುಂಬಿದೆ ಬಾಳಲಿ
ನಿನ್ನ ಪ್ರೀತಿಯ ಕಡಲು ಸೇರಿದೆ
ಎನ್ನ ಜೀವದ ಜೀವನದಿ

ಮೂರುಕಾಲವೂ ಮೂಡಿಬರುತಿವೆ
ನೂರುಭಾವವೂ ಮನದಲಿ
ನಿನ್ನ ಕಾಣುವ ಕಾತುರತೆಯೂ
ಹಿರಿದಾಗುತ ಪ್ರತೀಕ್ಷಣ

ನಿನ್ನ ಎಲ್ಲ ಕನಸುಗಳನು
ಕೈಯ ಹಿಡಿದು ನಡೆಸುವೆ
ನಿನ್ನ ನಗುವ ಮೊಗದ ಸಿರಿಯು
ಎಂದೂ ಮಾಸದಂತಿರಿಸುವೆ
ಎಂದೂ ಹೀಗೆಯೇ ಮುಂದೆಸಾಗುವ
ಚೆಂದದಿಂದಲಿ ಬಾಳುತ
ಒಂದೇ ಮನದಲಿ ಒಂದೆ ಮಾತನು
ಒಂದೇ ರಾಗದಿ ಹಾಡುತ
- ಜಯಪ್ರಕಾಶ ಶಿವಕವಿ

ಮಣ್ಣಿನಲಿ ಮಣ್ಣಾಗಿ ಹುಟ್ಟಿದವರು


ನಾವು ಮಣ್ಣಿನಲಿ ಮಣ್ಣಾಗಿ 
ಹುಟ್ಟಿದವರು 
ಅವರಿವರಿಂದ ತುಳಿಸಿಕೊಂಡು 
ಥೂ ಅನಿಸಿಕೊಂಡು 
ಹೊಟ್ಟೆಕಿಚ್ಚನು ಜಗಕೆ ಹಚ್ಚುವತೆರದಲಿ 
ನೋಡು ನೋಡುತ್ತಲೇ
ಮೇಲೆದ್ದು ಬಂದವರು 

ಎಲ್ಲ ಮೇರೆಗಳನ್ನು ಮೀರಿ 
ಬಿಗಿಹಿಡಿದು ಕೆಳಸೆಳೆವ 
ಎಲ್ಲ ಬಂಧಗಳನ್ನು ತೂರಿ 
ಬದುಕು ಕಟ್ಟಿಕೊಂಡವರು 
ಬಾನಿನೆತ್ತರಕೆ ಬೆಳೆಯ 
ಹೊರಟವರು.

ನಾವು ಮಣ್ಣಿನಲಿ ಮಣ್ಣಾಗಿ 
ಹುಟ್ಟಿದವರು 
ಅವರಿವರು ಉಂಡು ಹುಟ್ಟು 
ಬಿಸುಟಿದ್ದೆಲ್ಲ  ತಿಂದು ಅರಗಿಸಿಕೊಂದವರು 
ಇಟ್ಟ ಎಡೆಯಲ್ಲಿರದೆ, ಹೋರಾಟದ ಕಿಚ್ಚಿನಲ್ಲಿ 
ನಮ್ಮ ನಾಳೆಗಳ ನಾವೇ, ನಮ್ಮ ಕೈಯಾರ 
ಕೆತ್ತಿಕೊಂದವರು. 

ಉರಿವ ಸೂರ್ಯನ  ಉರಿಯು
ಕೋರೆವ ರಾತ್ರಿಯ ಚಳಿಯು 
ಭೋರ್ಗರೆವ ಮುಸಳಧಾರೆಯು 
ಹೊಸಕಿ ಹಾಕದ, ಆತ್ಮಸ್ಥೈರ್ಯವ ಹೊತ್ತು 
ಬಾನ ಚುಕ್ಕಿಗಳಿಗೆ ಮುತ್ತುಗರೆಯ
ಹೊರಟವರು.

ನಾವು ಮಣ್ಣಿನಲಿ ಮಣ್ಣಾಗಿ 
ಹುಟ್ಟಿದವರು 
ಮಣ್ಣಿನಲ್ಲೇ ಬೇರಿತ್ತು, ಪಾತಳಕ್ಕಿಳಿಸಿ 
ಎಲ್ಲ ಸತ್ವವನು ಹೀರಿ 
ವಿಶಾಲ ಹಾಲುಹಾದಿಯ ತುಂಬಾ 
ತುಂಬ ಹೊರಟವರು 

-ಜಯಪ್ರಕಾಶ್ ಶಿವಕವಿ 

Tuesday, April 19, 2011

ನೀನೆ ತಾನೆ ಜೀವವಾದೆ

ನೀನೆ ತಾನೆ ಜೀವವಾದೆ
ನನ್ನ ಜೀವದ ಜೀವಕೆ
ನೀನೆ ತಾನೆ ಭಾವವಾದೆ
ನನ್ನ ಎದೆಯ ರಾಗಕೆ

ನಿನ್ನ ಪ್ರೀತಿಯ ಬೇಲಿಯೊಳಗೆ
ಬಂಧಿಯಾಗಿದೆ ಈ ಮನ
ನಿಂತ ನಿಲುವಿನಲ್ಲೆ, ನಲ್ಲೆ
ಮರೆತು ಹೋದೆ ನನ್ನೆನಾ

ನಿನ್ನ ನಗೆಯ ಮೊದಲ ನೆನಪು
ಮತ್ತೆ ಮತ್ತೆ ಕಂಡಿದೆ
ನಿನ್ನ ಗೆದ್ದ ಗುಂಗಿನೊಳಗೆ
ಎದೆಯು ಏನೋ ಹಾಡಿದೆ

ನೀನೆ ತಾನೆ ಜೀವವಾದೆ
ನನ್ನ ಜೀವದ ಜೀವಕೆ
ನೀನೆ ತಾನೆ ಭಾವವಾದೆ
ನನ್ನ ಎದೆಯ ರಾಗಕೆ

ಎಂದೋ ಕಂಡ ಕನಸ ಬಿಂಬ
ಕಣ್ಣ ಮುಂದೆ ಬಂದಿದೆ
ಒಲವೆ ನಿನ್ನ ಒಂದೆ ನೋಟ
ನನ್ನ ತನವ ಮರೆಸಿದೆ

ನಿನ್ನ ಮನದ ಮಾತುಗಳಿಗೆ
ನನ್ನ ದನಿಯು ಕೂಡಿದೆ
ಬರುವ ನನ್ನ ದಿನಗಳೆಲ್ಲಾ
ನಿನ್ನದಾಗೆ ಹೋಗಿದೆ

ನೀನೆ ತಾನೆ ಭಿತ್ತಿಯಾದೆ
ನನ್ನ ಬಾಳ ಕವನಕೆ
ನೀನೆ ತಾನೆ ಬಣ್ಣವಾದೆ
ನನ್ನ ಎದೆಯ ಭಾವಕೆ

ನೀನೆ ತಾನೆ ನನ್ನ ಜಗವು
ನನ್ನ ಜೀವದ ಕಣಕಣಕೆ
ನೀನೆ ತಾನೆ ಕೊನೆಯ ಗುರಿಯು
ನನ್ನ ಬಾಳ ಪಯಣಕೆ

-ಜಯಪ್ರಕಾಶ ನೇ ಶಿವಕವಿ

Wednesday, February 16, 2011

ಮುಗುದೆ ನಿನ್ನ ಮನದ ದುಗುಡ

ಮುಗುದೆ ಮುಡಿದ ಮಲ್ಲೆ ಮೊಗ್ಗು
ಅರಳದಿವೆ ಮನಸ ಮುನಿದು
ಗಲ್ಲೆನ್ನುವ ಕೈಯ ಬಳೆಗಳು
ಕೊರಳಬಿಗಿದಿವೆ ಕೋಪ ತಳೆದು

ಮುಗುದೆ ನಿನ್ನ ಮೊಗದ ಗೆರೆಯ
ಹಿಂದೆ ದುಗುಡವೆನೋ ಅಡಗಿದೆ
ತುಟಿಯ ಮೇಲೆ ಅರಳದಲೆ ಕಿರುನಗೆ
ಮೊಗದ ಕಳೆಯು ಕಳೆದಿದೆ

ಹಳೆಯ ದಿನದ ಕಳೆದ ಕತೆಯ
ಕಳೆದು ಹೋಗಲು ಬಿಟ್ಟುಬಿಡು
ಸೆಳೆದು ಸೆಳೆದು ಯಾಕೆ ಕೊರಗುವೆ
ಸುಳಿಯ ನೀನು ತೊರೆದುಬಿಡು

ಮುಗುದೆ ನಿನ್ನ ಮನದ ದುಗುಡ
ಮರಳಿ ಬಾರದೆ ದೂರಹೋಗಲಿ
ನಿನ್ನ ಎದೆಯ ಭಾರವಿಳಿದು
ಮನಸು ಹಗುರವಾಗಲಿ

ಮಾತು ಕೊಡುವೆ ಮನಸಿನಿಂದ
ಆತುಕೊಳುವೆ ಕೊನೆಯವರೆಗೆ
ಅತ್ತ ಇತ್ತ ಹೊರಳದಂತೆ
ಮತ್ತೆ ಏನ ನೆನೆಯದಂತೆ

ಒಂದೆ ನುಡಿಯು ಒಂದೆ ನಡೆಯು
ಅಂದು ಇಂದು ಎಂದೂ ಒಂದೆ
ಮುಂದೆ ಬೇರೆಯಾಡದಂತೆ
ಇಂದೆ ವಚನ ನೀಡುವೆ

ತೂರಿ ಬರುವನು ತೂರ್ಪಿನಲ್ಲಿ
ಮೇರೆ ಅರಿಯದ ದಿನಕರ
ತೆರೆದ ಮನಸು, ತೆರೆದ ಹೃದಯ
ತೆರವಿಲ್ಲದ ಸ್ವಾಗತಿಸುವೆ

ಮುಗುದೆ ನಿನ್ನ ಮನದ ದುಗುಡ
ಮರಳಿ ಬಾರದೆ ದೂರಹೋಗಲಿ
ನಿನ್ನ ಎದೆಯ ಭಾರವಿಳಿದು
ಮನಸು ಹಗುರವಾಗಲಿ

ರಚನೆ :-ಜಯಪ್ರಕಾಶ ನೇ ಶಿವಕವಿ

Friday, January 7, 2011

ಗೆಳತಿ


ಗೆಳತಿ ನಿನ್ನದೇ ಮುಖ..
ಮರೆತೇ ಹೊಗಿತ್ತು
ಅ೦ತರಾಳದಲಿ ಸೆರಿಕೊ೦ಡು
ಅಲೆ ಎಬ್ಬಿಸದೆ ಮಲಗಿತ್ತು.

ತುಟಿಯ೦ಚಿನಲಿ
ಅರಳಿದ ಆ ನಗೆ
ಸಹಜವಾಗಿಯೇ ಇತ್ತು
ನಿನ್ನದೇ ಆದ ಆ ಮುಖವನು
ಮರೆ ಮಾಚುವ ತವಕದಲಿತ್ತು

ಬದುಕು ಸಹಜವಾದುದು
ಅದಕೇಕೆ ಬಣ್ಣ ಬಳಿಯಬೇಕು
ಇದ್ದದೆಲ್ಲವನು ಇದ್ದ ಹಾಗೆ
ಹೇಳಲಾಗದ ಯಾತನೆ ಯಾಕೆ ಬೇಕು?


ಹೌದು!
ಅ೦ದೊ೦ದು ದಿನ ಸ೦ಜೆಯಲ್ಲಿ
ಕೆ೦ಪೇರಿತ್ತು ಸುತ್ತಮುತ್ತಲಲ್ಲಿ
ಭೂತಾಯಿ ನಾಚಿ ನೀರಾಗಿ
ಮಧುವಣಗಿತ್ತಿಯ೦ತಾಗಿ
ಮರೆಯುತ್ತಿರುವ ಸಮಯದಲ್ಲಿ
ಹಕ್ಕಿಗಳ ಹಿ೦ಡು, ಮರಳುತ್ತಿತ್ತು ಗೂಡಿಗೆ,
ಮಕ್ಕಳ ಪಾಲನೆಗೆ
ತುಸು ಅಕ್ಕಿ ಹೊತ್ತುಕೊ೦ಡು,
ಹಾಡುತ್ತ, ಕುಣಿಯುತ್ತ…
ಚಿತ್ತಾರ ಬರೆಯುತ್ತ..
ಅ೦ಬರದಲ್ಲಿ…


ಬೆಳಕು ಮುರಿಯಿತು
ಕತ್ತಲಾವರಿಸಿತು
ತಾರೆಗಳ ಹಿ೦ಡು ಧುಮ್ಮಿಕ್ಕಿ ಬ೦ತು
ಅ೦ಗಳಕೆ ಆಡಲು,
ತಿ೦ಗಳ ಚ೦ದ್ರಮನ ಜೊತೆಗೆ,
ನೀರವತೆಯು ತು೦ಬಿತ್ತು
ಸುತ್ತಲೂ, ಎತ್ತೆತ್ತಲೂ…


ನನ್ನ ಜೊತೆ ನೀನು
ನಿನ್ನ ಜೊತೆ ನಾನು
ಊರ ಹೊರಗಿನ ಕೆರಯ ಅ೦ಗಳದಲ್ಲಿ
ಮೌನ ಮುರಿಯಲು ಇಲ್ಲ
ಮಾತನಾಡಲು ಇಲ್ಲ
ನನ್ನೆಡೆಗೊ೦ದು ನೇಟ ಬೀರಿ,
ತುಸು ನಕ್ಕು, ಅತ್ತು,
ನೀನೊರಟೆ ಹಿಡಿದು ಊರ ದಾರಿ,
ನಾ ಕಾರಣ ಕೇಳುವ ಮೊದಲೇ…


ನಾ ಕಾದೆ, ಅದೇ ಜಾಗದಲಿ
ಮತೇ ನೀ ಬರುವೆ ಎ೦ಬೊ೦ದು ಆಸೆಯಲಿ
ನಮ್ಮ ಕನಸಿನ ಪ್ರೇಮಸೌಧದ ನೆನಪಿನಲಿ
ಸುದ್ದಿ ಇರಲಿಲ್ಲ, ಸುಳುವು ಸಿಗಲಿಲ್ಲ…


ಆದರೇ!
ಒಮ್ಮಿ೦ದೊಮ್ಮೆಲೇ…
ಹೇಗೋ ತಿಳಿಯಿತು
ನೀ ಬಹುದೂರ ಹೊದದ್ದು
ಸ೦ಪ್ರದಾಯದೊಳೆಯಲ್ಲಿ
ತೇಲಿ, ಆ ದಡವ ಸೇರಿದ್ದು
ಅರ್ಥವಾಯಿತು ನಿನ್ನ ಆ
ನಗು ತು೦ಬಿದಳುವು,
ಅಳುತು೦ಬಿದ ನಗುವು
ಮತ್ತೇನ ಮಾಡುವುದು
ಹೊತ್ತು ಮೀರಿ ಹೋಗಿತ್ತು
ದಾರಿ ಅಲ್ಲಿ ಕವಲಾಗಿತ್ತು.

ಬದುಕಲ್ಲವೇ ಇದು!
ಬದುಕ ಬೇಕಾಯ್ತು ನೋಡು
ಮನಸೊ೦ದು ಕಡೆ,
ಒಡಲೊ೦ದು ಕಡೆ,
ಹೇಗೋ ಸ೦ಭಾಳಿಸಿದೆ ಕೊನೆಗೆ,
ತ೦ದು ಮನಸನು ತಹಬದಿಗೆ.
ಗ೦ಡಸಲ್ಲವೇ ನಾನು!
ಅಳುತ ಕೂರುವುದು ಸರಿಯೇ?
ನಕ್ಕೆ! ನಕ್ಕೇ !!
ದಿನ ಹೋಗಿ ಅದೇ ಜಾಗದಲಿ!
ನಿನ್ನ ನೆನಪುಗಳನೆಲ್ಲ
ಅಳಿಸಿ ಹಾಕುವ ನೆವದಲ್ಲಿ.


ಹೋಗಲಿ!
ಹಳೆಯ ಹಾಡನು
ಮರೆವೆ ನಾನು
ಹೇಗಿರುವೆ ಮದುವೆಯಾಗಿ?
ಮೂರು ಮಕ್ಕಳ ತಾಯಾಗಿ?
ನೆನಪಿದ್ದರೆ ನಿನಗೆ, ನಮ್ಮ ಆ ಕ್ಷಣಗಳನು
ಮರೆತು ಬಿಡೆ೦ದು ಬೆಡುವೆನು
ಒಲವ ಬದಿಗಿಟ್ಟು
ಸ್ನೇಹದ ಗಿಡವ ನೆಟ್ಟು
ಬೆಳೆಸೋಣ, ಬದುಕೋಣ..
ಕವಲೊಡೆದ ದಾರಿಯಲಿ
ಒಬ್ಬರಿಗೊಬ್ಬರು ನೆರವಾಗುತಲಿ
ಈ ಬಾಳ ಸವೆಸೋಣ….
- ಜಯಪ್ರಕಶ್ ನೇವಾರ ಶಿವಕವಿ