Tuesday, February 19, 2008

ಜಾನಪದ ಹಾಡು.


ಅವಳಿಲ್ಲದಾಗ ಮುಂಜಾನೆ ಎದ್ದು

ಮಾಡಬೇಕ್ರಿ ಮನೆಯ ಕೆಲಸ

ಅವಳೆಂದು ಮನೆಗೆ ಬರುತಾಳೆ ಏನೋ

ನನಗಿಲ್ರಿ ಅಷ್ಟು ಸೊಗಸ

ಕಸಬರಿಗೆ ಹಿಡಿದು ಹಸನಾಗಿ ಬಳಿದು

ಒಲೆ ಬೂದಿ ಚೆಲ್ಲಬೇಕು

ಮುಸುರೀಯ ತಿಕ್ಕಿ ಹೊಸ್ತಿಲನು ಸಾರ್ಸಿ

ರಂಗೋಲಿ ಹುಯ್ಯಬೇಕು


ಒಲೆ ಊದಿ ಊದಿ ಹೊಗೆ ಬಡಿಸಿಕೊಂಡು

ಕಣ್ಣೀರ ಒರೆಸಿಕೊಂಡೆ

ತಲೆ ಸೂಲಿಯಿಂದ ಅವಳನ್ನು ಬೈದು

ಗುಳುಗೀಯ ತೆಗೆದುಕೊಂಡೆ


ತಲೆದಿಂಬು ಹಾಸ್ಗೆ ಚಾದರವ ನೋಡಿ

ಏನೇನೊ ನೆನೆದುಕೊಂಡೆ

ಕೆಡಿಸಿದಳು ಬುದ್ಧಿ, ತವರೂರೆಗ್ಹೋಗಿ

ಮಾಡಲೇನು ಮಲಗಿಕೊಂಡೆ।
ಜಾನಪದ ಹಾಡು। (ಸಂಗ್ರಹ )

Friday, February 15, 2008

ಬೆಂಗಳೂರ ಬೀದಿಗಳಲ್ಲಿ......

ಹಗಲು ಇರುಳು ಅತಂತ್ರನಾಗಿ
ವಾರವೆಲ್ಲ ಯಂತ್ರವಾಗಿ
ವಾರದಕೊನೆ ಮನುಜನಾಗಿ,
ಬದುಕಿರುವೆ ನಾ ಬೆಂಗಳೂರ ಬೀದಿಗಳಲ್ಲಿ।

ನಗುವ ಮುಸುಡುಗಳ ನಗುವಿಲ್ಲಿ
ನಂಬುವ ಹಾಗೆ ಇರುವುದಿಲ್ಲ
ನಡೆವುದೆಲ್ಲ ಇಲ್ಲಿ ನಿಜವು ಎಂದು
ತೋರುವ ಹಾಗೆ ಕಾಣುವುದಿಲ್ಲ

ಯಾವ ವಾರ, ಯಾವ ತಿಥಿ
ಯಾವುದೊಂದು ತಿಳಿವುದಿಲ್ಲ
ಎಷ್ಟು ಜನರೊ, ಎಷ್ಟು ಮಾತೋ
ಯಾವುದೊಂದು ಅರಿವುದಿಲ್ಲ

ಆರ ಜೊತೆಗೊ ಆರ ಮಾತೊ
ಆರ ನಾರು ಬಲ್ಲರಿಲ್ಲ
ದೂರ-ದೂರ ದೇಶಗಳಿಗೆ
ಗಳಿಗೆ-ಗಳಿಗೆ ಗೊಮ್ಮೆ ಕರೆಯೊ

ಒಡನೆ ಆಡಿ, ಒಡನೆ ಬೆಳೆದ
ಒಂದೆ ಗಂಗಾಳದಲ್ಲಿ ಉಂಡ
ಎಳೆಯ ಗೆಳೆಯರೆಲ್ಲರಿಗೂ
ಹತ್ತಿರವಿದ್ದು ಬಹು ದೂರ ದೂರ ನಾನು।

ಹುಟ್ಟಿ ನಲಿದ ನಾಡು ಏಕೆ?
ಹಾಡಿ ಉಲಿದ ಭಾಷೆಯೇಕೆ?
ಎಲ್ಲ ಮರೆತೆ, ಎಲ್ಲ ತೊರೆದೆ
ಮನವ ಮೆತ್ತಿದ ಹಣ-ಹೆಸರ ಮದಕೆ।

ಸಂಚಾರಿ ಒತ್ತಡಗಳ ನಡುವಿನಲ್ಲಿ
ಬಗೆ-ಬಗೆ ಮಂದಿಗಳ ಸಂತೆಯಲ್ಲಿ
ನಾನೂ ಕಳೆದು ಹೋದೆ
ಬೆಂಗಳೂರ ಬೀದಿಗಳಲ್ಲಿ

ಜಯಪ್ರಕಾಶ ನೇ ಶಿವಕವಿ