Tuesday, July 27, 2010

ನಾ ಬಲ್ಲೆ ಅದನ್ನೆಲ್ಲಾ ನೀ ಹೇಳದಿದ್ದರೂ

ಎಲ್ಲೋ ಕೇಳಿದ ಮಧುರ ಹಾಡು
ಅಲೆ ಅಲೆಯಾಗಿ ಹೊಮ್ಮುತಿದೆ
ಎದೆಯ ಸದನದಿ ನೇರ
ನೀ ಎದುರಾದ ಖುಷಿಯಿಂದ
ನೀ ಬಲ್ಲೆ ಅದನ್ನೆಲ್ಲಾ ನಾ ಹೇಳದಿದ್ದರೂ

ನಾ-ನೀನಿರುವ
ಈ ಜಗದ ಮೊಗಸಾಲೆಯಲಿ
ಹಲವು ನೂರು ಜನರಿದ್ದರೂ
ನಾನು ಮಾತ್ರವೇ ಒಂಟಿ
ನೀ ಬಲ್ಲೆ ಅದನೆಲ್ಲಾ ನಾಹೇಳದಿದ್ದರೂ

ನುಡಿವ ಮಾತುಗಳಿಲ್ಲಿ
ನಡೆವ ಹೆಜ್ಜೆಗಳಲ್ಲ
ನುಡಿಗೂ-ನಡೆಗೂ ತಪ್ಪಿರುವ ಮೇಳದಲ್ಲಿ
ಬರಿ ಹಿಮ್ಮೇಳ ನಾನು-ನೀನು
ನಾ ಬಲ್ಲೆ ಅದನ್ನೆಲ್ಲಾ ನೀ ಹೇಳದಿದ್ದರೂ

ಬದುಕು ವಾಸ್ತವದಲ್ಲಿ
ಶುಷ್ಕ ವ್ಯವಹಾರ
ಜಗದ ಜುತ್ತದು ಇಂದು
ಒಣ ಹಣದ ಕೈಯಲ್ಲಿ
ನಾ-ನೀ... ಅದರಲ್ಲಿ ಒಬ್ಬರು
ನಾ ಬಲ್ಲೆ ಅದನ್ನೆಲ್ಲಾ ನೀ ಹೇಳದಿದ್ದರೂ

ಪ್ರವಾಹಕ್ಕಿದಿರಾಗಿ ಈಸಿ
ದಡ ಸೇರಲರಿಯದೆ
ಬದಲಿಸಿದೆ ಗತಿಯ
ಬದುಕುವದ ಕಲಿಯಲು
ನೀ ಬಲ್ಲೆ ಅದನೆಲ್ಲಾ ನಾ ಹೇಳದಿದ್ದರೂ

ಒಲಿದು ಬಂದ ಒಲವೆ ನೀನು

ಒಲಿದು ಬಂದ ಒಲವೆ ನೀನು

ಎಂದೋ ನೋಡಿದ
ನೆನಪು ಎಲ್ಲೋ ಕೂಡಿದ ನೆನಪು
ನೆನಪಿನ ನೆನಪಲ್ಲೆ
ಮರೆತ ಮರೆವಿನ ಸುಳಿಹು ನೀನು " ೧ "

ಕಾಂತಿಯಿಲ್ಲದ ಚೆಂದ್ರ
ಹೊಳೆವ ಗುಟ್ಟಾದ ಕಂಡೆ
ನನ್ನ ಕಣ್ಣಲಿ ಸುಳಿದ
ನಿನ್ನ ಕಣ್ಣ ಮಿಂಚಿನಿಂದ " ೨ "

ಕೋಟಿ ತಾರೆಯ ಮಿಂಚು
ಸುಳಿದು ಕಣ್ಣಂಚಿನಲಿ
ಸೆಳೆಯುತಿದೆ ಎನ್ನ
ನಿನ್ನ ಸೂಜಿಗಲ್ಲಿನ ನಿಲುವು " ೩ "

ಹಗಲು ಇರುಳುಗಳಲ್ಲಿ
ಬದುಕ ದ್ವಂದ್ವಗಳಲ್ಲಿ
ಕಳೆದ ನಿನ್ನೆಯ ನೆನಪ
ಭರವಸೆಯ ಬೆಳಕು ನೀನು " ೪ "

ಎಲ್ಲಿ ಬದುಕಲಿ ಹೇಗೆ ಬದುಕಲಿ
ಎಂದಿತ್ತು ಬಾಳ ನಿಲುವು
ಬದುಕಿಗೊಂದು ನೆಲುವ ತೋರೆ
ಬಂದ ಬದಲಾವಣೆಯೇ ನೀನು " ೫ "

ಮೋಸವಿಲ್ಲದ ಮಾತು
ಕಪತವಿಲ್ಲದ ನೋಟ
ಎಳೆಗರುವ ಎತ್ತಾಗಿಸಲು
ಒಲಿದು ಬಂದ ಒಲವೇ ನೀನು " ೬ "