Friday, April 18, 2008

ನಾ ಸೊತಾಗಲೆಲ್ಲಾ

ನಾ ಸೊತಾಗಲೆಲ್ಲಾ, ನಾ ಎಡವಿದಾಗಲೆಲ್ಲಾ,
ಬರುವನೊಬ್ಬನಪರಿಚಿತ ಮುನ್ನಡೆಸಲೆನ್ನ
ನಾ ಬಿದ್ದಾಗಲೆಲ್ಲಾ, ನಾ ಖಿನ್ನನಾದಾಗಲೆಲ್ಲಾ
ಬರುವನೊಬ್ಬನಪರಿಚಿತ ಮುನ್ನಡೆಸಲೆನ್ನ.

ಜೊತೆಯಾಗಿ ಬಾಳುವನು, ಹೊರಾಡುವನು,
ಬಾಳೆ೦ಬ ಕದನದಲ್ಲಿ, ಗೆಲುವ ತ೦ದಿಡುವವನು,
ತನ್ನೆಲ್ಲಾ ಜಾಣತನದಿ೦ದ, ತನ್ನಮಿತ ಶಕ್ತಿಯಿ೦ದ,
ಅವನೇ ಅವನು ನನ್ನೊಳಗೆ ನೆಲೆಸುವ೦ತವನು

ಈಸೊ೦ದು ದಿನ, ಬೇರೇನೊ೦ದನೂ ನಾನೆಣಿಸಲಿಲ್ಲ
ಅವನು ನನ್ನೊಳಗೆ ಇರುವನೆ೦ಬೊ೦ದು ನೆವದಲ್ಲಿ
ಹೊಳೆವ ರವಿಕಿರಣಗಳ ತೆರನಿದ್ದ ಅವನ ನೆನವಲ್ಲಿ
ತೊರೆಯನವನೆ೦ದಿಗೂ ಎ೦ಬ ತು೦ಬು ಭರವಸೆಯಲ್ಲಿ

ಬದಲಾಗುತಿವೆ ಸಮಯ, ಬದಲಾಗುತಿವೆ ಋತುಗಳು
ನಾನು ಮಾತ್ರವೇ ಒ೦ಟಿ, ಯಾರಿಲ್ಲದೆ ಎನ್ನ ಜೊತೆಯಲ್ಲಿ
ಕಳೆದುಕೊ೦ಡು ಗೆಲುವುಗಳನು,ಸೆಳೆದುಕೊ೦ಡೆ ಸೋಲುಗಳನು
ಎಲ್ಲಿರುವೆಯೊ ಗೆಳೆಯ, ನನ್ನ ಮುನ್ನಡೆಸದೆ ನೀನು

ದಿನಗಳುರುಳಿದ೦ತೆಲ್ಲಾ, ದುಃಖಗಳೂ ಏರುತ್ತಿವೆ
ನಾ ಸರಿಯೊ, ನಾ ತಪ್ಪೊ ಅರಿವಾಗದ೦ತಿದೆ ನನಗೆ
ಬೇಕಾಗಿದೆ ನನಗೀಗ ನಿಮ್ಮಗಳಲ್ಲೊಬ್ಬರ ನೆರವು
ಬರುವಿರಾ ಯಾರಾದರು ನೆರವ ನೀಡುವ ಧೈರ್ಯದಲಿ

ಅವನೇ ನನ್ನ ಆತ್ಮ, ನನ್ನೊಳಗಿನ ಆಲೋಚನೆಗಳು
ಯಾರಾದರು ಅವನ ನನ್ನೆಡೆಗೆ ತರುವಿರಾ
ಭಯವಿದ್ದರೇನು, ಬಿಕ್ಕಟ್ಟುಗಳಿದ್ದರೇನು ನನ್ನೊಳಗೆ
ಆರದೆ ಇದೆ ಇನ್ನೂ ಭರವಸೆ, ಮತ್ತೊಮ್ಮೆ ಅವನು ನನ್ನಲ್ಲಿ ನೆಲೆಸುವನೆ೦ದು..

(ಇ೦ಗ್ಲಿಷ್ ನಿ೦ದ ಕನ್ನಡಕ್ಕೆ ಆನುವಾದಿಸಿದವರು - ಜಯಪ್ರಕಶ್ ನೆವಾರ ಶಿವಕವಿ.)

Thursday, April 17, 2008

ಮುನ್ನಡೆ ಮನವೆ

ನಿಲ್ಲು ಮನವೆ, ಅಲ್ಲಿ ಇಲ್ಲಿ ಏಕೆ ಅಲೆಯುವೆ

ಏನ ನೆನೆದು, ಏನ ಕರೆದು ನೀನು ಕೊರಗುವೆ

ಹಿರಿದು ಕಿರಿದು ಎಲ್ಲ ಸುಳ್ಳು

ಮೇಲು ಕೀಳು ಬರಿ ಜೊಳ್ಳು

ನಂಬದಿರು, ನೆಚ್ಚದಿರು

ಮಾಯೆಯ ಮಾಯೆಯಲಿ ನೀನು ಸಿಲುಕದಿರು।


ಆರಿಗಿಲ್ಲ ಆರು ಸಾಟಿ

ಆರಮೇಲೋ ಆರ ಪೈಪೋಟಿ।

ಒಬ್ಬರಂತೆ ಒಬ್ಬರಲ್ಲ

ಅರಿತು ಅರಿಯದಿರುವೆಯಲ್ಲ।


ಬಾಳಿನಲ್ಲಿ ಎಲ್ಲ ಉಂಟು,

ಉಂಟು ಎಂದುಕೊಂಡರೆ।

ಏನೂ ಇಲ್ಲ, ಎಲ್ಲ ಇದ್ದು

ಇಲ್ಲ ಎಂದು ಕೊಂಡರೆ।


ಇರುವು ಇರವುಗಳ ನಡುವೆ

ಏನಿಲ್ಲ ಅಂತ ಫರಕು

ಅದು ನಿನ್ನ ಭ್ರಮೆ

ಬರಿ ಭ್ರಾಂತಿ ಹರಕು-ಹರಕು।

ನಿಲ್ಲು ಮನವೆ, ಅಲ್ಲಿ ಇಲ್ಲಿ ಏಕೆ ಅಲೆಯುವೆ

ಏನ ನೆನೆದು, ಏನ ಕರೆದು ನೀನು ಕೊರಗುವೆ

ಬುದ್ದನೇಳಿದ ಬದ್ದಿ ಮಾತು

ನೀನು ಮರೆತೆಯಾ

ನಿನ್ನ ಒಡನೆ ನೀನೆ

ಕಾಳಗಕೆ ನಿಂತೆಯಾ।


ಆಸೆ ಎಂಬುದು ಬಿಸಿಲ ಕುದುರೆ

ದುಸ್ತರವು ಅದನ ಏರುವುದು

ವಾಸ್ತವದ ಅರಿವು ಅರಿತುಕೊಂಡು

ಮುನ್ನಡೆ ನೀ ಶರಣಾಗದೆ।

ಬದುಕ ಇಬ್ಬಂದಿಗಳಿಗೆ

ಬೆನ್ನ ತೋರಿಸದಿದ್ದು

ಸದಾ ಒಳಿತನ್ನೆ ನೆನೆದು

ಮುನ್ನಡೆ ನೀ ಶರಣಾಗದೆ।


ಅಲ್ಲಿ ಇಲ್ಲಿ ಅಲೆವುದನ ಬಿಟ್ಟು

ಹಿಡಿದ ದಾರಿಯಲಿ ಮನಸನಿಟ್ಟು

ಮುನ್ನಡೆ ನೀ ಮನವೆ, ಅವರನಿವರನು ನೋಡುವುದ ಬಿಟ್ಟು
- ಜಯಪ್ರಕಾಶ ನೇ ಶಿವಕವಿ.

Tuesday, April 8, 2008

ಕವಿತಳಿಲ್ಲದೆ, ಕವಿತೆ

ಕವಿತಳಿಲ್ಲದೆ, ಕವಿತೆ
ಮನಕೆ ಒಗ್ಗಿತು ಹೇಗೆ?
ಗಾಳಿಯಿಲ್ಲದೆ, ಗಂಧ
ಜಗಕೆ ಹಬ್ಬಿತು ಹೇಗೆ?

ಕವಿತಳನು, ಕವಿತೆಯನು
ಎದೆಯಲದುಮಿಕೊಂಡು
ಹೊಳೆಯ ದಾಟಿ, ಕಡಲನಾರಿ
ಪರನಾಡಲಿಳಿದುಕೊಂಡೆ।

ಅವಕಾಶವೊ, ಅನಿವಾರ್ಯವೊ?
ಬಾಳ್ವೆಯ ಸುದಿನವೊ, ದುರ್ದಿನವೊ
ಆರನರಿಯೆ, ಆರಕಾಣೆ
ಬರಿ ಗೊಂದಲವು, ಮನದೊಳಗೆ....

ಎದುರು ಗೊಂಡವರೆಲ್ಲ
ಹಲ್ಲು ಕಿರಿವಾಗ
ಇಷ್ಟವೊ, ಅನಿಷ್ಟವೊ
ಮುಖವರಳುವುದು ಅದರರಿವಿಲ್ಲದೆಯೆ।

------1------
ಸುತ್ತಲೆಂದರೆ, ಒಪ್ಪಿತೇಗೆ ಮನ
ಒಂಟಿಯಾಗಿ, ಒಬ್ಬೊಂಟಿಯಾಗಿ
ಬೇಸರದ ಆಸರಿಕೆಗೆ, ಅವಳಿಲ್ಲದೆ
ಕವಿತಳಿಲ್ಲದೆ, ಜೊತೆಯಾಗಿ

ತುಡಿತವೊ, ಎದೆ ಮಿಡಿತವೊ
ಭಾವತುಮುಲದ ತೀವ್ರತೆಯೊ
ನನ್ನೂರ ನೇಸರನ, ಬೇಸರಕೆ
ಜೊತೆ ಮಾಡಿದಳು, ಬೈಗಿನಲು ಬೆಳಗಿನಲು

ಕವಿತಳಿಲ್ಲದೆ, ಬಳಿಯಲ್ಲಿ
ಬರಿ ಕನಸು, ಇರುಳಲ್ಲಿ
ನಾ ನಿಲ್ಲಿ, ಅವಳಲ್ಲಿ
ಬರಿ ನೆನಪು ನಮ್ಮಲ್ಲಿ।

ಕವಿತಳನು, ಕವಿತೆಯನು
ನಾ ದೂರಮಾಡಿಕೊಂಡು
ಹಗಲು, ಇರುಳು ಬಡಿದಾಡುತಿರುವೆ
ಜಗದ ನೊಗವ ಮೇಲೇರಿಕೊಂಡಂತೆ

ಇರುವುದೊಂದೆ,ಸಮಾಧಾನ
ಇದು ಎಲ್ಲಾ ಬರಿ ನಾಲ್ಕುದಿವಸ
ಕವಿತೆಯನು, ಕವಿತಳನು ಕಾಣ್ವದಿನ
ದೂರವಿಲ್ಲವೆಂಬುದೆ, ಮನಕೆ ಹರುಷ
- ಜಯಪ್ರಕಾಶ ನೇ ಶಿವಕವಿ।