Tuesday, September 10, 2013

ನನ್ನ ಕನಸುಗಳೆಲ್ಲ

ನನ್ನ ಕನಸುಗಳೆಲ್ಲ
ನನ್ನೊಳಗೊಳಗೆ ಉಡುಗಿ ಹೋಗುತಿರಲು
ಅಡಗಿ ನೋಡಲಿ ಹ್ಯಾಗೆ
ನಾನು ಸುಮ್ಮನೆ

ನನ್ನ ಕನಸುಗಳೆಲ್ಲ
ಕಸುವ ಕಳೆದುಕೊಳ್ಳುತಿರಲು
ಕುಳಿತು ನೋಡಲಿ ಹ್ಯಾಗೆ
ನಾನು ಸುಮ್ಮನೆ

ನನ್ನ ಕನಸುಗಳೆಲ್ಲ
ಕೈ ಕೊಸರಿ, ಜಾರಿ ದೂರವಾಗುತಿರಲು
ನಿಂತು ನೋಡಲಿ ಹ್ಯಾಗೆ
ನಾನು ಸುಮ್ಮನೆ

ನನ್ನ ಕನಸುಗಳೆಲ್ಲ
ಕೊನೆಯ ಉಸುರಿಡಿದು
ಆಸರೆಯ ಬಯಸಿ
ದೆಸೆ-ದೆಸೆಗೆ, ಕೈ ಕೈ ಚಾಚುತಿರಲು
ಕೈ ಕಟ್ಟಿಕೊಂಡು, ನೋಡಲಿ ಹ್ಯಾಗೆ
ನಾನು ಸುಮ್ಮನೆ

ನನ್ನ ಕನಸುಗಳಿಗಾಗಿ
ಹೊತ್ತ ಮನ್ನೆಷ್ಟೋ
ಆಳ ಬಾವಿಗಳಿಂದ
ಎತ್ತಿದ್ದ ನೀರೆಷ್ಟೋ
ಹೊತ್ತು ಸಾಗಲು ನಿತ್ಯ
ತುಳಿದ ಮುಳ್ಳುಗಳೆಷ್ಟೊ

ನನ್ನ ಕನಸುಗಳನೆಲ್ಲಾ
ಬಹುದಿನಗಳಿಂದ
ಬಹುಜತನದಿಂದ
ಜೋಪಾನ ಮಾಡಿ
ನೀರೆರೆದು, ಗೊಬ್ಬರವುಣಿಸಿ
ಬೆಳೆಸಿದ್ದೆನು
ನನ್ನದೆಲ್ಲವನೂ, ನಾನದರಲ್ಲೇ
ಕಾಣಬಯಸಿದ್ದೇನು

ನನ್ನ ಕನಸುಗಳೆಲ್ಲ
ಮಂಕಾಗಿ ಮಲಗಿದವೇ?
ಮೊಗ್ಗಾಗಿ, ಅರಳದಲೆ
ಬಾಡಿಹೊಗುವವೇ?
ಮಿಡಿಯಾಗಿ, ಕಾಯಾಗಿ
ಹಣ್ಣಾಗದೇ
ಉದುರಿ ಹೋಗುವವೇ?

ಕುಸಿದ ಕನಸುಗಳನ್ನು
ಹಿಡಿದು ಮೇಲೆತ್ತಿ
ತಲೆಯೆತ್ತಿ ನಿಲ್ಲಿಸಲು
ಧೈರ್ಯವನ್ನು ನೀಡಿ
ದೃಢತೆಯನು ನೀಡಲು
ಶಸ್ತ್ರಚಿಕಿತ್ಸೆಯನು ಮಾಡಿ
ಸುಸ್ಥಿತಿಗೆ ತಂದಿಡಲು
ಬೇಕಿದೆ ಗೆಳೆಯಾ !
ನಿನ್ನಾತ್ಮ ಸ್ಥೈರ್ಯದ
ಅಖಂಡ ವಿಶ್ವಾಸದ
ವಿಶ್ವಾತ್ಮ ಚೇತನದ
ಬಲ ಬೆಂಬಲದ
ಸವಿ ಸಿಹಿಯ ಸ್ಫೂರ್ತಿ


ಹೊಳೆವ ತಾರೆಗಳ
ಹೊಳಪಾಗಿ ಬಾ ಗೆಳೆಯಾ
ಸಿಡಿವ ಕೋಲ್ಮಿಂಚುಗಳ
ವಿದ್ಯುತ್ ಚ್ಛಕ್ತಿಯ
ಸಂಚಲನವಾಗಿ
ಮೊಳಗುವ ಗುಡುಗುಗಳ
ಆರ್ಭಟಿಸುವ ಸಿಡಿಲುಗಳ
ಘನ ಘೋಷವಾಗಿ

-ಜಯಪ್ರಕಾಶ್ ಶಿವಕವಿ