Wednesday, February 16, 2011

ಮುಗುದೆ ನಿನ್ನ ಮನದ ದುಗುಡ

ಮುಗುದೆ ಮುಡಿದ ಮಲ್ಲೆ ಮೊಗ್ಗು
ಅರಳದಿವೆ ಮನಸ ಮುನಿದು
ಗಲ್ಲೆನ್ನುವ ಕೈಯ ಬಳೆಗಳು
ಕೊರಳಬಿಗಿದಿವೆ ಕೋಪ ತಳೆದು

ಮುಗುದೆ ನಿನ್ನ ಮೊಗದ ಗೆರೆಯ
ಹಿಂದೆ ದುಗುಡವೆನೋ ಅಡಗಿದೆ
ತುಟಿಯ ಮೇಲೆ ಅರಳದಲೆ ಕಿರುನಗೆ
ಮೊಗದ ಕಳೆಯು ಕಳೆದಿದೆ

ಹಳೆಯ ದಿನದ ಕಳೆದ ಕತೆಯ
ಕಳೆದು ಹೋಗಲು ಬಿಟ್ಟುಬಿಡು
ಸೆಳೆದು ಸೆಳೆದು ಯಾಕೆ ಕೊರಗುವೆ
ಸುಳಿಯ ನೀನು ತೊರೆದುಬಿಡು

ಮುಗುದೆ ನಿನ್ನ ಮನದ ದುಗುಡ
ಮರಳಿ ಬಾರದೆ ದೂರಹೋಗಲಿ
ನಿನ್ನ ಎದೆಯ ಭಾರವಿಳಿದು
ಮನಸು ಹಗುರವಾಗಲಿ

ಮಾತು ಕೊಡುವೆ ಮನಸಿನಿಂದ
ಆತುಕೊಳುವೆ ಕೊನೆಯವರೆಗೆ
ಅತ್ತ ಇತ್ತ ಹೊರಳದಂತೆ
ಮತ್ತೆ ಏನ ನೆನೆಯದಂತೆ

ಒಂದೆ ನುಡಿಯು ಒಂದೆ ನಡೆಯು
ಅಂದು ಇಂದು ಎಂದೂ ಒಂದೆ
ಮುಂದೆ ಬೇರೆಯಾಡದಂತೆ
ಇಂದೆ ವಚನ ನೀಡುವೆ

ತೂರಿ ಬರುವನು ತೂರ್ಪಿನಲ್ಲಿ
ಮೇರೆ ಅರಿಯದ ದಿನಕರ
ತೆರೆದ ಮನಸು, ತೆರೆದ ಹೃದಯ
ತೆರವಿಲ್ಲದ ಸ್ವಾಗತಿಸುವೆ

ಮುಗುದೆ ನಿನ್ನ ಮನದ ದುಗುಡ
ಮರಳಿ ಬಾರದೆ ದೂರಹೋಗಲಿ
ನಿನ್ನ ಎದೆಯ ಭಾರವಿಳಿದು
ಮನಸು ಹಗುರವಾಗಲಿ

ರಚನೆ :-ಜಯಪ್ರಕಾಶ ನೇ ಶಿವಕವಿ